1) ಓದುವುದು , ಕಲಿಯುವುದು ಮತ್ತು ಜ್ಞಾನ ಸಂಪಾದನೆ :
ವಿದ್ಯೆ, ಪ್ರಪಂಚದಲ್ಲಿ ಜೀವಿಸಲು ಇಂದು ಅತ್ಯಂತ ಅವಶ್ಯಕ ಸಾಧನ. ವಿದ್ಯೆ ಮತ್ತು ಜ್ಞಾನವಿಲ್ಲದಿದ್ದರೆ ಜೀವನವು ದುಸ್ತರವಾಗಿ ಬಿಡುತ್ತದೆ. ವಿದ್ಯೆ ಮನುಷ್ಯನಲ್ಲಿ ಬಚ್ಚಿಡಲ್ಪಟ್ಟಿರುವ ಆಸ್ತಿಯಿದ್ದಂತೆ. ಆದರೆ ಅದನ್ನು ಯಾರೂ ಕದಿಯಲು ಹಾಗೂ ಮೋಸದಿಂದ ವಂಚಿಸಲು ಸಾಧ್ಯವಿಲ್ಲ. ವಿದ್ಯೆಯಿಂದ ಯೋಗ, ಬೋಗ, ಕೀರ್ತಿ, ಸೌಖ್ಯ, ಸಂತೋಷ, ನೆಮ್ಮದಿ ಎಲ್ಲವೂ ಲಭ್ಯ. ವಿದ್ಯೆ ಗುರುಗಳಿಗೂ ಗುರುವಿದ್ದಂತೆ.
ಜ್ಞಾನವಿಲ್ಲದಿದ್ದರೂ ಪರವಾಗಿಲ್ಲ, ಆದರೆ ಜ್ಞಾನ ಸಂಪಾದಿಸಲು ಇಷ್ಟವಿಲ್ಲದಿದ್ದಲ್ಲಿ ನಿಜವಾಗಿಯೂ ನಿರರ್ಥಕ ಜೀವನವಾಗಿ ಬಿಡುತ್ತದೆ. ಆದುದರಿಂದ ಯಾವಾಗಲೂ ಜ್ಞಾನದ ದಾಹವಿರಲಿ, ಕಲಿಯುವ ಆಸಕ್ತಿ ಇರಲಿ. ಮನುಷ್ಯ ನಿರಂತರ ವಿದ್ಯಾರ್ಥಿ. ನಾವುಗಳೆಲ್ಲರೂ ಸಾವಿನವರೆಗೂ ಕಲಿಯುತ್ತಲೇ ಇರಬೇಕು. ಇದು ಅತ್ಯಂತ ಸಹಜ ಕ್ರಿಯೆ.
ನಮಗೆ ಯಾವುದರ ಬಗ್ಗೆ ತಿಳಿದಿಲ್ಲ ಎಂದು ಅರಿಯುವುದೇ ಜ್ಞಾನ ಸಂಪಾದನೆಗೆ ಮೊದಲ ಮಾರ್ಗ. ತಿಳಿದಿಲ್ಲ ಎಂದು ಬೇಸರಿಸಿಕೊಳ್ಳುವ ಪ್ರಮೇಯವೇ ಇಲ್ಲ. ಇದನ್ನು ಅರಿತು ನಂತರ ಕಲಿಯುವತ್ತ ಗಮನ ಹರಿಸೋಣ. ಯಾವ ವ್ಯಕ್ತಿ ತನಗೆ ಎಲ್ಲಾ ತಿಳಿದಿದೆ ಎಂದು ಭಾವಿಸುತ್ತಾನೋ ಅಂತಹ ವ್ಯಕ್ತಿ ಕಲಿಯುವುದು ಅತಿ ಹೆಚ್ಚು ಇರುತ್ತದೆ. ಸಣ್ಣ ಹುಡಗನಿದ್ದಾಗ ಕೇಳಿದ್ದ ಒಂದು ಕಥೆ, ದೇವರು ಮತ್ತು ಗುರು ಒಟ್ಟಿಗೆ ಪ್ರತ್ಯಕ್ಷವಾದರೆ ಯಾರಿಗೆ ಮೊದಲು ವಿದ್ಯಾರ್ಥಿ ನಮಸ್ಕಾರ ಮಾಡುತ್ತಾನೆ, ಭಾರತೀಯ ಸಂಸ್ಕೃತಿಯ ಪ್ರಕಾರ ಮೊದಲು ಗುರುವಿಗೆ ನಮಸ್ಕಾರ ಮಾಡತಕ್ಕದ್ದು. ಕಾರಣ ಬಹಳ ಸಮಂಜಸ, ಅದೆಂದರೆ ಗುರುವಿನ ಮಾರ್ಗದರ್ಶನ ಮತ್ತು ಸಹಾಯವಿಲ್ಲದೆ ವಿದ್ಯಾರ್ಥಿಗೆ ದೇವರನ್ನು ಸಂಧಿಸಲು ಸಾಧ್ಯವಾಗುತ್ತಿತ್ತೆ.
2) ಕರ್ಮಣ್ಯೇ ವಾಧಿಕಾರಸ್ಥೇ.
ಭಗವದ್ಗೀತೆಯ ಜನಜನಿತ ಶ್ಲೋಕ
" ಕರ್ಮಣ್ಯೇವಾದಿಕಾರಸ್ಥೇ ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ಭೂರ್ಮಾತೇ ಸಂಗೋಸ್ಜಕರ್ಮಣಿ||
"ಕರ್ಮ ಮಾಡಲು ನಿನಗೆ ಅಧಿಕಾರವಿದೆ, ಅದರ ಫಲಗಳಲ್ಲಿ ನಿನಗೆ ಅಧಿಕಾರವಿಲ್ಲ. ಫಲವನ್ನು ಪಡೆಯಲೇಬೇಕೆಂಬ ಹಠಬೇಡ, ಕರ್ಮಮಾಡಿಯೂ ಪ್ರಯೋಜನವಿಲ್ಲವೆಂಬ ಚಿಂತೆಯೂ ಬೇಡ"
ಮೇಲಿನ ದೃಷ್ಟಾಂತವನ್ನು ಶ್ರೀ ಕೃಷ್ಣ ಪರಮಾತ್ಮನು ಅರ್ಜುನನು ತಾನು ಯುದ್ಧ ಮಾಡುವುದಿಲ್ಲವೆಂದು ಕೈಕಟ್ಟಿ ಕುಳಿತಾಗ ಮಾಡಿದ ಉಪದೇಶವೆಂದು ಸರ್ವೆಸಾಮಾನ್ಯ ಬಹುಪಾಲು ಜನರಿಗೆ ತಿಳಿದ ಸಂಗತಿಯಾಗಿದೆ. ಇಂತಹ ಹಲವಾರು ಶ್ರೀಮಂತಿಕೆಯ ಉಪದೇಶಗಳು ಇರುವ ಹಾಗೂ ಕ್ರಿಯಾಶೀಲತೆಯ ತೌರಿನ ರಾಷ್ಟ್ರದಲ್ಲಿ ಜನಿಸಿದ ನಾವು ಕಾರ್ಯಶೀಲತೆಯತ್ತ ಚಿಂತಿಸುವ ಅವಶ್ಯಕತೆಯೇ ಇಲ್ಲ. ಮೇಲಿನದನ್ನು ಚಾಚೂ ತಪ್ಪದೆ ಪಾಲಿಸಿದರೆ ಕೇವಲ ತೃಪ್ತಿ, ಮನಸ್ಸಂತೋಷವಷ್ಟೇ ಅಲ್ಲ, ಆಧ್ಯಾತ್ಮಿಕ ಶಾಂತಿಯೂ ನಮ್ಮದಾಗುತ್ತದೆ. ನಿರಾಸೆಯಿಂದ ದೂರವುಳಿಯುತ್ತೇವೆ.
ಇದಲ್ಲದೆ ಭಗವಂತನನ್ನು ತಲುಪುವ ಹಲವಾರು ಮಾರ್ಗಗಳಲ್ಲಿ ಕರ್ಮಯೋಗ ಅಥವಾ ಕರ್ಮಮಾರ್ಗವೂ ಒಂದು. ಈ ರೀತಿಯಾಗಿ ಕರ್ಮಯೋಗದ ಸತ್ವವನ್ನರಿತು ಜೀವಿಸಿ ನಮ್ಮ ಜೀವನದ ಜೊತೆಗೆ ಇತರರ ಜೀವನವನ್ನು ಪಾವನಗೊಳಿಸುವ ಅವಕಾಶಗಳನ್ನು ಉಪಯೋಗಿಸಿಕೊಳ್ಳೋಣ. ಕರ್ಮಫಲದ ನಿರೀಕ್ಷೆಯಿಟ್ಟುಕೊಂಡು ಕರ್ಮ ಮಾಡಬೇಡ. ಫಲ ಬಂದರೆ ಅನುಭವಿಸು, ಬಾರದಿರೆ ಕರ್ಮವಷ್ಟೇ ನಿನ್ನದೆಂದು ತಿಳಿದು ಸಂತೋಷವಾಗಿರು ಎನ್ನುವ ಈ ಬೋದನೆಯ ಮುಂದೆ, ಪ್ರಪಂಚದಲ್ಲಿ ಸಂತೋಷದಿಂದ ಜೀವಿಸಲು ಇನ್ನಾವುದೇ ಜ್ಞಾನದ ಅವಶ್ಯಕತೆಯಿಲ್ಲ ಎಂದರೂ ತಪ್ಪಾಗಲಾರದು.
" He who struggles is better than he who never attempts "
3) ಕಡಿಮೆ ಮಾತು ಹೆಚ್ಚು ಕೆಲಸ.
ಅತೀ ಹೆಚ್ಚು ಮಾತು ಒಳ್ಳೆಯದಲ್ಲ. ಅದರಲ್ಲೂ ಕೆಲಸದ ಸಮಯದಲ್ಲಿ ಮಾತು ಅನವಶ್ಯಕ. ಕಡಿಮೆ ಮಾತಿನಿಂದ ಕೆಲಸದ ನಿರ್ವಹಣೆ ಉತ್ತಮವಾಗುತ್ತದೆ. ಉತ್ತಮ ಕೆಲಸದಿಂದ ಉತ್ಪಾದಕತೆ ಹೆಚ್ಚುತ್ತದೆ. ಇದರಿಂದ ವೈಯಕ್ತಿಕ ಯಶಸ್ಸಿನ ಜೊತೆಗೆ ಕೆಲಸ ಮಾಡುವ ಸಂಸ್ಥೆಯ ಕಾರ್ಯವೈಖರಿ ಹೆಚ್ಚುತ್ತದೆ. " ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು" ಎಂಬಂತೆ ಹೆಚ್ಚು ಮಾತಿನಿಂದ ಆಗಬಹುದಾದ ಚಿಂತೆಯ ಪ್ರಸಂಗಗಳ ಮೇಲೆ ಹತೋಟಿ ಸಾಧಿಸಬಹುದು. ಕಡಿಮೆ ಮಾತು ಅಷ್ಟೆ ಅಲ್ಲದೆ ಮಾತಿನ ಲಕ್ಷಣವೂ ಬಹು ಮುಖ್ಯ. ಮಾತು ಅರ್ಥಪೂರ್ಣವಾಗಿರಬೇಕು. ಸತ್ಯದಿಂದ ಕೂಡಿರಬೇಕು. ಮಾತು ಮೃದುವಾಗಿದ್ದರಂತೂ ಅಪ್ಯಾಯಮಾನ. ಸಂಕ್ಷಿಪ್ತತೆ ಅತ್ಯಂತ ಅವಶ್ಯಕ. ಬಸವಣ್ಣನವರು ವಚನದಲ್ಲಿ ತಿಳಿಸಿರುವುದು ಅದೆಷ್ಟು ಸತ್ಯ.
ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ ಅಹುದುಹುದೆನ್ನಬೇಕು
ನುಡಿಯೊಳಗಾಗಿ ನುಡಿಯದಿದ್ದರೆ ಕೂಡಲಸಂಗಯನೆಂತೊಲಿವನಯ್ಯ?
ಇದರ ಜೊತೆಗೆ ಮಾತಿನಿಂದ ಇತರರ ಮನಸ್ಸಿಗೆ ನೋವುಂಟಾಗದಂತೆ ಎಚ್ಚರವಹಿಸಬೇಕು. ಸಂದರ್ಭೋಚಿತವಾಗಿರಬೇಕು. ಸ್ವನಂಬಿಕೆಯಿಲ್ಲದೆ ಅಂಜಿಕೆಯಿಂದ ಕೂಡಿರಬಾರದು. ದುರಾಶಾಯುಕ್ತವಾಗಿರಬಾರದು. ಸಿಟ್ಟಿನಲ್ಲಿ ಮಾತನ್ನು ನಿಯಂತ್ರಿಸಿದಲ್ಲಿ ಅತ್ಯುತ್ತಮ ಫಲಗಳು ಲಭ್ಯ.
4) ಸಜ್ಜನರ ಸಹವಾಸ ಮಾಡುವುದು
ಆಂಗ್ಲ ಬಾಷೆಯಲ್ಲಿ ಒಂದು ಗಾದೆಯಿದೆ. ನಿನ್ನ ಸ್ನೇಹಿತರಾರೆಂದು ಹೇಳು, ನಾನು ನಿನ್ನ ಗುಣಗಳನ್ನು ಹೇಳುತ್ತೇನೆ ಎಂದು. ನಮ್ಮಲ್ಲಿಯೂ ಯಾರಾದರೂ ವ್ಯಕ್ತಿ ಮೊದಲಿನಂತಿಲ್ಲದೆ ಸ್ವಲ್ಪ ತಪ್ಪ ಮಾಡಿದರೆ ಹೇಳುವ ಸಾಮಾನ್ಯ ಮಾತು. ಸಹವಾಸ ದೋಷ.
ತ್ರಿಕರಣ ಶುದ್ದರೊಳು | ಪ್ರಕೃತಿಯಳಿದಾತ್ಮರೊಳು
ಸಕಲರೊಳು ಚಿತ್ತವೆರೆದರೊಳಾವಗಂ
ಸಖತನವು ಲೇಸು ಸರ್ವಜ್ಞ ||
ನಮ್ಮ ಸ್ನೇಹವು ಯಾವಾಗಲೂ ತ್ರಿಕರಣ (ಕಾಯಾ-ವಾಚಾ-ಮನಸಾ) ಶುದ್ದವಿರುವವರಲ್ಲಿ ಇರಬೇಕು. ಮಾನವ ಸಹಜವಾದ ರಾಗ- ದ್ವೇಷ ಅಸೂಯೆ ಇವುಗಳನ್ನು ಅಳಿದ ಎಲ್ಲರಲ್ಲೂ ಸಮಾನತೆಯಿಂದ ಹೊಂದಿಕೊಳ್ಳುವ ಜನರೊಂದಿಗೆ ಸ್ನೇಹವನ್ನು ಮಾಡುವುದು ಒಳ್ಳೆಯದು.
ಪರಸ್ಪರ ಸಂಬಂಧಗಳಲ್ಲಿ ಪರಿಚಯ, ಸ್ನೇಹ, ಗಾಡ ಸ್ನೇಹ, ಪ್ರಾಣ ಸ್ನೇಹ ಎಂಬುದಾಗಿ ವಿಂಗಡಿಸಬಹುದು. ಪರಿಚಯ ಹಂತದ ನಂತರದ ಹಂತಗಳಿಗೆ ಹೋಗುವ ಮುಂಚೆ ಸಜ್ಜನಿಕೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.
ನನ್ನ ಸ್ನೇಹಿತನೋರ್ವ ಕಾಲೇಜು ಉಪನ್ಯಾಸಕ. ಹೀಗೆ ವ್ಯಕ್ತಿಯೋರ್ವರ ಪರಿಚಯವಾಗಿ, ಪರಿಚಯ ಸ್ನೇಹವಾಗಿ, ಗಾಡ ಸ್ನೇಹದ ಹಂತಕ್ಕೆ ತಲುಪುವ ಸಮಯ, ಉಪನ್ಯಾಸಕ ಹಾಗೂ ಅವನ ಮನೆಯವರು ಊರಿಗೆ ಹೋಗಬೇಕಾದ ಸಂದರ್ಭ. ಸ್ನೇಹಿತ ಅವರ ಅನುಪಸ್ಥಿತಿಯಲ್ಲಿ ರಾತ್ರಿ ಹೊತ್ತು ಮಲಗಲು ಒಪ್ಪಿಕೊಳ್ಳುತ್ತಾನೆ. ಒಂದು ವಾರ ಊರಿಗೆ ಬಂದ ನಂತರ ಮಧ್ಯದಲ್ಲಿ ಒಂದು ದಿನ ಕಳ್ಳತನವಾಗಿ ಉಪನ್ಯಾಸಕರ ಮನೆಯಲ್ಲಿದ್ದ ಟಿ.ವಿ , ಟೇಪರಿಕಾರ್ಡರ್ ಎರಡು ಕಳ್ಳತನವಾಗಿರುವುದು ತಿಳಿಯುತ್ತದೆ. ಪೋಲಿಸರಿಗೆ ದೂರು ಕೊಡುತ್ತಾರೆ. ಇದಾದ ಆರು ತಿಂಗಳ ನಂತರ ಟಿವಿ ಸಿಕ್ಕಂತಿದೆ ಗುರುತಿಸಿ ಬನ್ನಿ ಎಂದು ಪೋಲಿಸರಿಂದ ಕರೆ. ಮಾನ್ಯ ಉಪನ್ಯಾಸಕ ಮಾಹಾಶಯರು ಹೋಗಿ ನೋಡಿ ಟಿವಿಯನ್ನು ಗುರುತಿಸುತ್ತಾರೆ. ಕಳ್ಳ ಯಾರೆಂದು ನೋಡಿದರೆ ಇವರ ಸ್ನೇಹನಾಗಿ ಮನೆಕಾಯಲು ಮನೆಯಲ್ಲಿ ಮಲಗಿದ್ದ ವ್ಯಕ್ತಿಯೇ ಟಿವಿಯನ್ನು ಮಾರುವ ಸಂದರ್ಭದಲ್ಲಿ ಪೋಲಿಸರಿಗೆ ಸಿಕ್ಕಿಬಿದ್ದಿರುತ್ತಾನೆ.
ವ್ಯವಹಾರಿಕ ಸಂಬಂಧಗಳು ವ್ಯವಹಾರಕ್ಕಷ್ಟೇ ಮೀಸಲಿದ್ದರೆ ಒಳ್ಳೆಯದು. ಅದನ್ನು ಮೀರುವ ಮುಂಚೆ ನಿಮ್ಮ ಮತ್ತು ಆ ವ್ಯಕ್ತಿಯ ಹೊಂದಾಣಿಕೆಗಳ ಬಗ್ಗೆ ಮತ್ತು ಗುಣಗಳ ಬಗ್ಗೆ ಪರಿಶೀಲಿಸಿಕೊಂಡು ಮುಂದುವರೆಯುವುದು ಶ್ರೇಯಸ್ಸು. ಇದರಿಂದ ಮುಂದೆ ಪೇಚಾಡಿಕೊಳ್ಳುವ ಪ್ರಸಂಗ ಬರದಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತದೆ.
ಇದರ ಜೊತೆಗೆ ನಕಾರಾತ್ಮಕ ಭಾವನೆಗಳನ್ನೇ ಹೊಂದಿರುವ ವ್ಯಕ್ತಿಗಳ ಸಹವಾಸವನ್ನು ವರ್ಜಿಸಿರಿ. ಬಹಳ ದಿನಗಳಾಗಿ ಬಿಟ್ಟರೆ ನೀವು ಅವರಂತೆ ಆಗುವ ಸಾಧ್ಯತೆಗಳಾಗಿ ಬಿಡುತ್ತದೆ. ಇದರಿಂದ ಸಾಧನೆ ಶೂನ್ಯವಾಗಿ ಕೇವಲ ಟೀಕಾಕಾರರಾಗಿಬಿಡುತ್ತೀರಿ.
5) ಟಿ.ವಿ ಗಳಿಂದ ಆದಷ್ಟು ದೂರವಿರುವುದು.
ಟಿ.ವಿ ಒಂದು ಮಾಧ್ಯಮ ಹಾಗೂ ಒಂದು ಮನರಂಜನಾ ವಸ್ತು ನಿಜ. ಆದರೆ ಅದರ ವೀಕ್ಷಣೆ ಇತಿಮಿತಿಯಲ್ಲಿದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ಸಮಯ ವ್ಯರ್ಥವಾಗುವುದರ ಜೊತೆಗೆ ಇಲ್ಲದ ಚಿಂತೆಗಳು ಆವರಿಸುತ್ತದೆ. ಮಕ್ಕಳಂತೂ ಅಸತ್ತತೆಗಳಿಂದ ಕೂಡಿದ ಜಾಹಿರಾತುಗಳನ್ನು ನೋಡಲು ಕಾಯುತ್ತಿರುತ್ತಾರೆ. ಇದರ ಪರಿಣಾಮ ಭೀಕರ ಎಂದರೂ ತಪ್ಪಲ್ಲ. ಆದರೆ ಆ ಭೀಕರತೆಯ ಅರಿವು ತಕ್ಷಣ ಆಗುವುದಿಲ್ಲ. ಟಿ.ವಿ ಯಲ್ಲಿ ಇಂದು ಚಿತ್ರ ವಿಚಿತ್ರ ಸೀರಿಯಲ್ ಗಳು , ಡ್ಯಾನ್ಸಗಳು ಮತ್ತು ಎಳೆಯ ಮನಸ್ಸುಗಳಿಗೆ ದಾರಿ ತಪ್ಪಿಸುವ ಮತ್ತು ಮನೆಯಲ್ಲಿರುವವರಿಗೆ ನೆಮ್ಮದಿ ಕದಡುವ ಕಾರ್ಯಕ್ರಮಗಳೇ ಹೆಚ್ಚು. ಟಿ.ವಿಯಲ್ಲಿ ನನ್ನ ಅಭಿಪ್ರಾಯದಲ್ಲಿ ನೋಡತಕ್ಕಂತಹ ಕಾರ್ಯಕ್ರಮಗಳೆಂದರೆ ವಾರ್ತೆಗಳು, ಪ್ರಾಣಿಗಳ ಪ್ರಪಂಚ, ಕ್ರೀಡಾ ಚಾನೆಲ್ ಗಳು , ಡಿಸ್ಕವರಿ ಚಾನೆಲ್ , ಲಘುಮನರಂಜನೆಯ ಕಾರ್ಯಕ್ರಮಗಳು, ಅಭಿವೃದ್ದಿದ್ಯೋತಕ ಕಾರ್ಯಕ್ರಮಗಳು, ಒಳ್ಳೆಯ ಸಿನಿಮಾಗಳು ಮತ್ತೀತರ ಕೆಲವು ಉತ್ತಮ ಮಟ್ಟದ ಮಕ್ಕಳ ಹಾಗೂ ಕಾರ್ಯಕ್ರಮಗಳು ಮಾತ್ರ.
ಉಳಿದವುಗಳನ್ನು ನೋಡಿ ಬೇಡದ್ದನ್ನು ತಲೆಗೆ ಮತ್ತು ಮನಸ್ಸಿಗೆ ತುಂಬಿಕೊಂಡು ಚಿಂತೆಗಳಿಂದ ಆವೃತವಾಗಿರುವುದನ್ನು ಕಂಡಿರುತ್ತೀರಾ ಅಥವಾ ಅನುಭವಿಸಿರುತ್ತೀರಾ. ಇದಲ್ಲದೆ ಕೊಳ್ಳುಬಾಕ ಸಂಸ್ಕೃತಿಯನ್ನು ಹೆಚ್ಚಿಸುತ್ತಿರುವ ವಸ್ಸು ಟಿ.ವಿ ಅವಶ್ಯಕತೆಯಿರಲಿ ಅಥವಾ ಇಲ್ಲದಿರಲಿ ಎಲ್ಲಾ ವಯಸ್ಸಿನವರಲ್ಲೂ, ಎಲ್ಲಾ ವರ್ಗದವರಲ್ಲೂ ಈ ಕೊಳ್ಳು ಬಾಕ ಸಂಸ್ಕೃತಿ ದಿನೇ ದಿನೇ ಹೆಚ್ಚುತ್ತದೆ. ಇಷ್ಟೇ ಅಲ್ಲ, ಈಗಲೇ ನಿಮ್ಮ ಅಡುಗೆ ಮನೆ ಅಥವಾ ಡ್ರಾಯಿಂಗ್ ಕೋಣೆಗೆ ಹೋಗಿರಿ ಅಲ್ಲಿರುವ ವಸ್ತು ಸಾಮಾಗ್ರಿಗಳ ಅವಶ್ಯಕತೆ ಬಗ್ಗೆ ಮುಕ್ತ ಮನಸ್ಸಿನಿಂದ ಯೋಚಿಸಿರಿ. ಕೆಲವೊಂದು ಪದಾರ್ಥಗಳನ್ನು ನಾವು ವರ್ಷಕ್ಕೆ ಒಂದು ಬಾರಿಯೂ ಉಪಯೋಗಿಸದಿರುವುದು ಕಂಡುಬರುತ್ತದೆ. ಕೆಲವೊಮ್ಮೆ ನಮ್ಮಲ್ಲಿರುವ ಶೇ 80 ರಿಂದ 90 ರಷ್ಟು ವಸ್ತು ಸಾಮಾಗ್ರಿಗಳು ಅನವಶ್ಯಕವಾದವುಗಳು ಎಂಬುದು ಮನದಟ್ಟಾಗುತ್ತದೆ. ಅಷ್ಟೇ ಅಲ್ಲ, ಈ ವಸ್ತುಗಳ ಖರೀದಿಗೆ ಸಾಲ ಮಾಡಿ ಬಹಳ ಪ್ರಯಾಸದಿಂದ ಖರೀದಿ ಮಾಡಿರುತ್ತೇವೆ. ಈ ರೀತಿಯ ಪ್ರಯೋಗವನ್ನು ನಾನು ಸ್ವಯಂ ಮಾಡಿ ನೋಡಿ ಮೇಲಿನ ನಿರ್ಧಾರಕ್ಕೆ ಬಂದಿದ್ದೇನೆ. ಅಂತಹ ಖರೀದಿಗೆ ಕಾರಣ ಟಿ.ವಿಯಲ್ಲಿ ಬರುವ ಜಾಹಿರಾತುಗಳು ಮತ್ತು ಮಾರಾಟಮಾಡುವವರು ಬಹಳ ಸರಾಗವಾಗಿ ನಿಮ್ಮ ಮನಸ್ಸನ್ನು ಗೆಲ್ಲುವ ಚಾಕಚಕ್ಯತೆಯೇ ಹೊರತು ಖಂಡಿತ ನಮ್ಮ ನಿಮ್ಮ ಅವಶ್ಯಕತೆಯಲ್ಲ.
No comments:
Post a Comment