ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವೇ ? How to Sharpen Memory Power

 


ʼನನಗೆ ತುಂಬಾ ಮರೆವು. ಅಪ್ಪ ಅಮ್ಮ ಹೇಳಿದ್ದು, ಮೇಷ್ಟ್ರು ಹೇಳಿದ್ದು , ಪಾಠ ಓದಿದ್ದು ಎಲ್ಲಾ ಮರೆತುಹೋಗುತ್ತೆ. ಜ್ಞಾಪಕ ಶಕ್ತಿ ಹೆಚ್ಚು ಮಾಡುವ ಟಾನಿಕ ಕೊಡಿʼ ಎಂದು ವಿದ್ಯಾರ್ಥಿಗಳು ವೈಧ್ಯರನ್ನು ಕೇಳುತ್ತಾರೆ. ಅಂತಹ ಔಷದ ಇನ್ನೂ ಲಭ್ಯವಿಲ್ಲ. ಆದರೆ ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಈ ಕೆಳಗೆ ಕೊಟ್ಟಿರುವ ಸಲಹೆಗಳನ್ನು ಪಾಲಿಸಿ.


1. ಮನಸ್ಸು ಮತ್ತು ಪರಿಸರ ಪ್ರಶಾಂತವಾಗಿರುವ ಸಮಯದಲ್ಲಿ ಮಾತ್ರ ಓದಿ. ಮನಸ್ಸು ಗಾಬರಿಗೊಂಡಿದ್ದಾಗ, ನೆಮ್ಮದಿಯನ್ನು ಕಳೆದುಕೊಂಡಿದ್ದಾಗ ಅಥವಾ ನಮ್ಮ ಸುತ್ತಮುತ್ತಲಲ್ಲಿ ಗದ್ದಲ, ಇತರ ಆಕರ್ಷಣೆಗಳಿದ್ದಾಗ ಅಧ್ಯಯನ ಮಾಡುವುದರಿಂದ ಬರೀ ಶ್ರಮವೇ ಹೊರತು ಬೇರಾವ ಪ್ರಯೋಜನವಿಲ್ಲ.  ಅಧ್ಯಯನ  ಮಾಡಲು ಬೆಳಗಿನ ಸಮಯ ಪ್ರಶಸ್ತವಾದುದು. ರಾತ್ರಿಯ ನಿದ್ದೆಯಿಂದ ನಮ್ಮ ಮೈ ಮನಸ್ಸು ಉಲ್ಲಸಿತವಾಗಿರುತ್ತದೆ. ಹಾಗೆಯೇ ಪರಿಸರ ಮುಂಜಾನೆಯಲ್ಲಿ ಚೇತೋಹಾರಿಯಾಗಿರುತ್ತದೆ.


2. ದೈನಂದಿನ ಜಂಟಾಡಗಳು, ಅನಿವಾರ್ಯ ಆತಂಕಗಳು, ಮನೆ ಶಾಲಾ ಕಾಲೇಜಿನ ಸಮಸ್ಯೆಗಳು, ಸುತ್ತಮುತ್ತಲಿನವರ ಕಿರಿ-ಕಿರಿ, ಹಣಕಾಸಿನ ತೊಂದರೆಗಳು, ಇತ್ಯಾದಿ ಅನೇಕ ಮನೋ-ಸಾಮಾಜಿಕ ಅಂಶಗಳು ನಮ್ಮ ಮನಸ್ಸಿನ ಸಮತೋಲನವನ್ನು ಏರು-ಪೇರು ಮಾಡುತ್ತವೆ. ನೆಮ್ಮದಿಯನ್ನು ಕಲಕುತ್ತವೆ. ನಮ್ಮ ನಿರ್ವಹಣಾ ಸಾಮರ್ಥ್ಯದ ಬಗ್ಗೆ ನಮಗೆ ಅನುಮಾನ ಬಂದಾಗ, ಫಲಿತಾಂಶದ ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಾಗ ʼಆತಂಕʼ ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ. ಇವೆಲ್ಲವನ್ನೂ  ನಿವಾರಿಸಿಕೊಳ್ಳಬೇಕೆಂದು ನಮಗೆ ಗೊತ್ತಿದ್ದರೂ ಹಾಗೆ ಮಾಡಲಾಗದೇ ಅಸಹಾಯಕರಾಗುತ್ತೇವೆ. ಇದಕ್ಕೆ ಲಭ್ಯವಿರುವ ಸರಳ ಪರಿಹಾರವೆಂದರೆ, ಕೆಲವು ಬಗೆಯ ಆರೋಗ್ಯಕರ ಚಟುವಟಿಕೆ ಮತ್ತು ಹವ್ಯಾಸಗಳನ್ನು ಬೆಳೆಸಿಕೊಂಡು, ಮೈ-ಮನಸ್ಸು ವಿರಮಿಸುವಂತೆ, ಉಲ್ಲಸಿತವಾಗುವಂತೆ ಮಾಡುವುದು. ನಮ್ಮ ಅನುಕೂಲ. ಅಭಿರುಚಿ ಹಾಗೂ ಸಮಯಕ್ಕೆ ತಕ್ಕಂತೆ ಈ ಹವ್ಯಾಸಗಳಲ್ಲಿ ಒಂದೆರಡನ್ನಾದರೂ ಹಮ್ಮಿಕೊಂಡು, ಪ್ರತಿದಿನ ಒಂದು ಘಂಟೆ ಕಾಲವಾದರೂ ಅವುಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.

  • ಒಳ್ಳೆಯ ಪುಸ್ತಕಗಳನ್ನು ಓದುವುದು
  • ಸಂಗೀತ ಶ್ರವಣ ಅಥವಾ ಕಲಿಯುವಿಕೆ
  • ಪ್ರಕೃತಿಯ ಮಧ್ಯೆ/ ಗಿಡ ಮರಗಳು, ಹೂಗಳಿರುವ ಕಡೆ  ತಿರುಗಾಟ
  • ತೋಟಗಾರಿಕೆ
  • ಯಾವುದೇ ಕ್ರೀಡೆ, ವ್ಯಾಯಾಮ
  • ಯೋಗಾಸನಗಳು, ಧ್ಯಾನ, ಪ್ರಾಣಾಯಾಮ
  • ಸೃಜನಾತ್ಮಕ ಚಟುವಟಿಕೆಗಳು(ಚಿತ್ರಕಲೆ/ಕಸೂತಿ/ಅಲಂಕರಣ ವಸ್ತುಗಳ ತಯಾರಿಕೆ)
  • ಅಪರೂಪ ವಸ್ತುಗಳ ಸಂಗ್ರಹಣೆ
  • ಇತರರಿಗೆ ನೆರವಾಗುವ ಸೇವಾ ಚಟುವಟಿಕೆಗಳು

3. ವ್ಯವಸ್ಥಿತ ದೈನಂದಿನ ಚಟುವಟಿಕೆ : ಬೆಳಗಿನಿಂದ ರಾತ್ರಿಯವರೆಗೆ ಯಾವ ಯಾವ ವೇಳೆಗೆ ಏನೇನು ಕೆಲಸ ಕರ್ತವ್ಯಗಳನ್ನು, ಮನರಂಜನಾ ಚಟುವಟಿಕೆಗಳನ್ನು ಮಾಡಬೇಕು ಎಂಬುದನ್ನು ಮೊದಲೇ ಯೋಚಿಸುವುದರಿಂದ, ಅಮೂಲ್ಯವಾದ ʼಕಾಲʼ ದ ಯೋಗ್ಯ ಬಳಕೆಯಾಗುತ್ತದೆ. ಆತಂಕ-ಉದ್ವೇಗವಿಲ್ಲದೆ, ಸರಾಗವಾಗಿ ನಮ್ಮ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಅವ್ಯವಸ್ಥೆ ಅಪಯಶಸ್ಸು ನೋವನ್ನು ತಂದರೆ, ಸುವ್ಯವಸ್ಥೆ ಯಶಸ್ಸು,  ಸಂತಸವನ್ನು ತರುತ್ತದೆ ಎಂಬುದನ್ನು ನೆನಪಿಡಿ

4. ಬಿಟ್ಟು ಬಿಟ್ಟು ಅಧ್ಯಯನ ಮಾಡುವುದು, ಮನನ ಮಾಡುವುದು :  ʼಡಾಕ್ಟರೇ, ಏನನ್ಯಾಯ ನೋಡಿ. ನಮ್ಮ ಹುಡುಗ ಕಳೆದ ಮೂರು ತಿಂಗಳಿನಿಂದ ಹಗಲೂ ರಾತ್ರಿ ಓದಿದ. ನಿದ್ರೆ, ಊಟದ ಬಗ್ಗೆಯೂ ಗಮನಕೊಡದೆ, ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಒಂದೇ ಸಮ ಕಷ್ಟಪಟ್ಟು ಓದಿದ. ಆತನಿಗೆ ಬಂದಿರುವ ಮಾರ್ಕ್‌ ನೋಡಿ..... ಶೆ55ʼ  ಎಂದು ಪೇಪರ್‌ ಪರಿಶೀಲಿಸಿದ ಉಪಾಧ್ಯಾಯರುಗಳ ಮೇಲೆ ದೋಷಾರೋಪಣೆಯ ಕಿಡಿಕಾರಿದರು ಸೋಮಯಾಜಿ.

ʼನಾನು ಕಷ್ಟಪಟ್ಟಿದ್ದೆಲ್ಲಾ, ಹೊಳೆ ನೀರಿನಲ್ಲಿ ಹುಣಸೆಹಣ್ಣು ಕಿವಿಚಿದಂತಾಯಿತು. ಸಾರ್‌, ಪರೀಕ್ಷಾ ಹಾಲ್‌ ನಲ್ಲಿ ಪ್ರಶ್ನೆಗಳಿಗೆ ಉತ್ತರವೇ ನೆನಪಿಗೆ ಬರಲಿಲ್ಲ. ಫೇಲಾದೆʼ ಎಂದ ಅವರ ಮಗ ಕಿರಣ.

ಹೀಗೆ ಮೈ-ಮನಸ್ಸುಗಳಿಗೆ ಶ್ರಮ ಮಾಡಿಕೊಂಡು, ಒಂದೇ ಸಮ ಓದಿದರೆ, ಮಿದುಳಿನ ನರಕೋಶಗಳು ಹೇಗೆ ವಿಷಯವನ್ನು ಸಂಗ್ರಹಿಸಲು, ಮುದ್ರಿಸಿಕೊಳ್ಳಲು ಸಾಧ್ಯ? ಆದ್ದರಿಂದ ಅಧ್ಯಯನ ಮಾಡುವಾಗ ಅರ್ಧ ಘಂಟೆ, ಓದಿದ್ದನ್ನು ಅರ್ಥಮಾಡಿಕೊಳ್ಳುತ್ತಾ ಓದಬೇಕು. ಸಮೀಪದಲ್ಲಿ ಇತರ ಯಾವ ಆಕರ್ಷಣೆಯೂ ಇರಬಾರದು (ಟ್ರಾನ್ಸಿಸ್ಟರ , ಮ್ಯಾಗಜೀನ್‌ ಇತ್ಯಾದಿ). ನಂತರ ಪುಸ್ತಕ ಮುಚ್ಚಿಟ್ಟು, ಏನು ಓದಿದೆ, ಮುಖ್ಯಾಂಶಗಳೇನು ಎಂದು ಮನನ ಮಾಡಬೇಕು. ಅಗತ್ಯ ಬಿದ್ದರೆ ಸ್ಲೇಟಿನ ಮೇಲೊ ಕಾಗದದ ಮೇಲೋ ಬರೆಯಬೇಕು. ಬಳಿಕ ಐದು ನಿಮಿಷ ವಿಶ್ರಾಂತಿಯ ನಂತರ ಮತ್ತೆ ಅರ್ಧ ಘಂಟೆ ಓದಬೇಕು. ಹೀಗೆ ಬಿಟ್ಟು ಬಿಟ್ಟು ಅಧ್ಯಯನ ಮಾಡುವುದು, ಮನನ ಮಾಡುವುದರಿಂದ ವಿಷಯಗಳು ಸಾಮಗವಾಗಿ, ನಮ್ಮ ಮಿದುಳಿನಲ್ಲಿ ಅಚ್ಚಾಗುತ್ತದೆ.

5.  ಸ್ಮರಣೆಗೆ ಅಭ್ಯಾಸ : ಹೀಗೆ ಕಲಿತ ವಿಚಾರಗಳನ್ನು, ಸಹಪಾಠಿಗಳೊಂದಿಗೆ ಆಗಾಗ್ಗೆ ಚರ್ಚಿಸಬೇಕು. ಹಿಂದಿನ ಪ್ರಶ್ನೆಪತ್ರಿಕೆಗಳನ್ನು ತೆಗೆದು, ನಿಯಮಿತ ಅವಧಿಯಲ್ಲಿ ಉತ್ತರ ಬರೆಯಬೇಕು. ವಿಚಾರಗಳನ್ನು ಸ್ಮರಣೆ ಮಾಡುವ ಯಾವುದೇ ಅವಕಾಶವನ್ನು ಬಿಡಬಾರದು. ಈ ಅಭ್ಯಾಸದಿಂದ ಸ್ಮರಣ ಶಕ್ತಿ ವೃಧ್ದಿಸುತ್ತದೆ ಎಂದು ಆಗಲೇ ತಿಳಿದಿದ್ದೀರಿ.


6.   ಅಧ್ಯಯನಕ್ಕೆ ಸಾಕಷ್ಟು ಸಮಯವನ್ನು ಹೊಂದಿಸಿಕೊಳ್ಳಿ. ಗಡಿಬಿಡಿ, ಒತ್ತಡವಿಲ್ಲದೆ ಅಧ್ಯಯನ ಮಾಡಿ. ನಿಧಾನವಾಗಿ ಕಲಿಯುವುದರಿಂದ ಹೆಚ್ಚು ಶ್ರಮವಾಗುವುದಿಲ್ಲ. ಹಾಗೇ ಕಲಿಯಬೇಕಾದ ವಿಷಯದ ಬಗ್ಗೆ ಪ್ರೀತಿ-ಆಸಕ್ತಿಯನ್ನು ಬೆಳೆಸಿಕೊಳ್ಳಿ. ಪ್ರಾರಂಭದಿಂದಲೇ ಪರೀಕ್ಷೆಗೆ ಸಿದ್ದತೆ ಮಾಡಬೇಕು. ಕಡೇ ಘಳಿಗೆಯ ಸಿದ್ದತೆಯಿಂದ, ಆತಂಕ ಒತ್ತಡ ಹೆಚ್ಚಿ ಓದಿದ್ದು ಬೇಗ ಮರೆಯುತ್ತದೆ.


ನೆನಪಿಡಿ :  ಜ್ಞಾಪಕಶಕ್ತಿಯಿಂದ ಹೆಚ್ಚಿಸುವ ಮಾತ್ರೆ, ಟಾನಿಕ್‌, ಇನಜೆಕ್ಷನಗಳಿಲ್ಲ. ಸತತ ಪ್ರಯತ್ನ ಅಭ್ಯಾಸದಿಂದ, ಮನಸ್ಸನ್ನು ನೆಮ್ಮದಿಯಾಗಿಟ್ಟುಕೊಳ್ಳುದರ ಮೂಲಕ ಮಾತ್ರ ಜ್ಞಾಪಕಶಕ್ತಿಯನ್ನು ವೃದ್ದಿಸಿಕೊಳ್ಳಬಹುದು.

No comments: